has gloss | kan: ಆಟಿ ಕಳೆಂಜ ತುಳು ನಾಡಿನ ಜನಪದ ಕುಣಿತಗಳಲ್ಲಿ ಒಂದು ಆಚರಣಾತ್ಮಕ ಕಲಾ ಪ್ರಕಾರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ನಲಿಕೆ ಜನವರ್ಗದಲ್ಲಿ ಕಾಣಸಿಗುವ ಕುಣಿತ. ಇದೇ ಕುಣಿತವನ್ನು ಬೆಳ್ತಂಗಡಿ ಭಾಗದಲ್ಲಿ ಮೇರ ಜನವರ್ಗದವರು ನಡೆಸಿಕೊಡುತ್ತಾರೆ. (ಯದುಪತಿ ಗೌಡ, ಸಂಶೋಧಕರು ಮಂಗಳೂರು ವಿಶ್ವ ವಿದ್ಯಾಲಯ-). ಈ ಕುಣಿತವನ್ನು ಆಷಾಡ ತಿಂಗಳಲ್ಲಿ ನಡೆಸುವುದರಿಂದ ಇದನ್ನು ಆಟಿ ಕಳಂಜ ಎಂತಲೂ ಕರೆಯಲಾಗಿದೆ. ಕಳೆಂಜ ಎಂದರೆ ಚಿಕ್ಕ ಬಾಲಕ, ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂದರ್ಥವೂ ಇದೆ.ಕಳಂಜನು ಊರಿಗೆ ಬಂದ ಮಾರಿಯನ್ನು (ರೋಗ-ರುಜಿನವನ್ನು) ಹೊಡೆದೋಡಿಸುತ್ತಾನೆ ಎನ್ನುವ ಆಶಯದಿಂದಾಗಿ ಈ ಕುಣಿತ ಪ್ರಕಾರವನ್ನು ಆಹ್ವಾನಿಸಿ ದಾನ ನೀಡುವರು. ನಲಿಕೆ ಜನವರ್ಗದವರು ನಡೆಸಿಕೊಡುವ ಈ ಕಳಂಜ ವೇಷ ಕಣಿಂಜ ಇದ್ದಿರಬಹುದೇನೋ ಎನ್ನುವ ಅನುಮಾನವೂ ಇದೆ. ಕಾರಣ: ಕಣಿಂಜ-ಎಂದರೆ ಮಾಟ-ಮಂತ್ರಗಳನ್ನು ದೂರ ಮಾಡುವವ ಎಂದರ್ಥ. ತುಳುವಿನ ಆಟಿ (ಆಷಾಢ: ಚಾಂದ್ರಮಾನದಲ್ಲಿ ನಾಲ್ಕನೆಯ ತಿಂಗಳು) ತಿಂಗಳಲ್ಲಿ ನಲಿಕೆ ಅಥವಾ ಪಾಣಾರ ಜನವರ್ಗದವರು ಆಟಿಕಳೆಂಜ ವೇಷವನ್ನು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ, ಸಣ್ಣ ಬಾಲಕನಿಗೆ ತಾಳೆಗರಿಯ ತತ್ರ (ಛತ್ರಿ) ಕೊಟ್ಟು ಕುಣಿಯಲು ಹಿಮ್ಮೇಳದಲ್ಲಿ ತೆಂಬರೆ'-ಯನ್ನು (ಚರ್ಮ ವಾದ್ಯ)ಪುರುಷ ವ್ಯಕ್ತಿ ನುಡಿಸುತಿರುತ್ತಾನೆ. ಕಳೆಂಜನ ವೇಷ ಭೂಷಣದಲ್ಲಿ ಮುಖ್ಯವಾಗಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಅಥವಾ ಕೈಗೆ-ಮೈಗೆ ಬಣ್ಣ, ಮುಖ್ಯವಾಗಿ ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿಗೆ ಇವುಗಳು ಆಟಿಕಳೆಂಜನ ವೇಷಗಳು. |